ಎಲೆಕ್ಟ್ರಾನ್ ಸ್ಫುರಣ: ಒಂದು ವಸ್ತುವಿನಿಂದ ಎಲೆಕ್ಟ್ರಾನ್ ಬಿಡುಗಡೆಯಾಗುವ ಕ್ರಿಯೆ(ಎಲೆಕ್ಟ್ರಾನ್ ಎಮಿಶನ್). ಯಾವ ವಸ್ತುವಿನಿಂದಲೂ ಎಲೆಕ್ಟ್ರಾನು ಅದೇ ಅದಾಗಿ ಹೊರ ಬರುವುದಿಲ್ಲ. ಅದು ವಸ್ತುವಿನಿಂದ ಬಿಡುಗಡೆಯಾಗಿ ಹೊರಗೆ ಬರಬೇಕಾದರೆ ಶಕ್ತಿಯ 

ಪುರೈಕೆಯಾಗಬೇಕು. ಇದು ಮುಂದೆ ತೋರಿಸುವ ಹಲವಾರು ರೀತಿಗಳಲ್ಲಾಗಬಹುದು.
1 ಉಷ್ಣ ಅಯಾನಿಕ ಸ್ಫುರಣ: ಒಂದು ವಸ್ತುವನ್ನು ಕಾಯಿಸಿದರೆ ಅದರ ಪರಮಾಣುಗಳ ಕಂಪನ ವೈಶಾಲ್ಯ ಒಂದು ನಿರ್ದಿಷ್ಟ ಕಂಪನಾಂಶಕ್ಕಿಂತ ಹೆಚ್ಚಾಗಿರುವ ಹೆಚ್ಚು ಕಂಪನಶಕ್ತಿಯನ್ನು ಹೀರಿಕೊಂಡ ಎಲೆಕ್ಟ್ರಾನುಗಳು ಹೊರಗೆ ಬರುತ್ತವೆ.    
2 ದ್ಯುತಿ ವಿದ್ಯುತ್ಕ್ರಿಯೆ: ಫೋ಼ಟಾನುಗಳಿಂದ ಬೆಳಗಿದ ವಸ್ತುಗಳು ಎಲೆಕ್ಟ್ರಾನುಗಳನ್ನು ಹೊರದೂಡುತ್ತವೆ. ಫೋಟಾನುಗಳ ಶಕ್ತಿ ಪ್ರತಿ ವಸ್ತುವಿನ ಗುಣಕ್ಕೆ ತಕ್ಕಂತೆ ಒಂದು ಕನಿಷ್ಠ ಮಿತಿಗಿಂತ ಹೆಚ್ಚಾಗಿರಬೇಕು, ಅಷ್ಟೆ. ಫೋಟಾನಿನ ಶಕ್ತಿಯನ್ನು ಹೀರಿಕೊಂಡ ಎಲೆಕ್ಟ್ರಾನ್ ಹೊರಕ್ಕೆ 

ಬರುತ್ತದೆ.
3 ದ್ವಿತೀಯ ಸ್ಫುರಣ: ವಿದ್ಯುದಂಶವಿರುವ ಕಣಗಳಿಂದ ವಸ್ತುಗಳನ್ನು ಘಟ್ಟಿಸಿದರೆ ಎಲೆಕ್ಟ್ರಾನುಗಳು ಹೊರಕ್ಕೆ ಬರುತ್ತವೆ. ಇಲ್ಲಿ ಕಣಗಳ ಶಕ್ತಿ ಭಾಗಶಃ ಎಲೆಕ್ಟ್ರಾನುಗಳಿಗೆ ಒದಗುತ್ತದೆ.
4 ಕ್ಷೇತ್ರ ಸ್ಫುರಣ ಅಥವಾ ಶೀತ ಸ್ಫುರಣ: ಪ್ರಬಲವಾದ ವಿದ್ಯುತ್ ಕ್ಷೇತ್ರದಲ್ಲಿರುವ ವಸ್ತುಗಳಿಂದ ಎಲೆಕ್ಟ್ರಾನುಗಳು ಹೊರಗೆ ಬರುತ್ತವೆ. ವಿದ್ಯುತ್ ಕ್ಷೇತ್ರದ ಪ್ರಚೋದನೆಯಿಂದ ಎಲೆಕ್ಟ್ರಾನುಗಳಿಗೆ ಬೇಕಾದ ಶಕ್ತಿಯ ಪುರೈಕೆಯಾಗುತ್ತದೆ.
ಅಯಾನೀಕರಣ ಮತ್ತು ಕಾಂಪ್ಟನ್ ಕ್ರಿಯೆಗಳಲ್ಲೂ ಎಲೆಕ್ಟ್ರಾನುಗಳು ಹೊರಗೆ ಬರುತ್ತವೆ. ಆದರೆ ಈ ಕ್ರಿಯೆಗಳನ್ನು ಎಲೆಕ್ಟ್ರಾನ್ ಸ್ಫುರಣ ಎಂದು ಕರೆಯುವುದಿಲ್ಲ.
(ಎಸ್.ಎ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ